ವೆಸ್ಲಿ, ಜಾನ್
	1703-91. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಮೆತೊಡಿಸ್ಟ್ ಧಾರ್ಮಿಕ ಚಳವಳಿಯನ್ನು ಹುಟ್ಟುಹಾಕಿ ಚರ್ಚ್‍ನ ಸುಧಾರಣೆಗಾಗಿ ದುಡಿದ ಕ್ರೈಸ್ತಪಾದ್ರಿ. ಇಂಗ್ಲೆಂಡಿನ ಎಪ್‍ವರ್ತ್‍ನಲ್ಲಿ 1703 ಜೂನ್ 17ರಂದು ಜನಿಸಿದ. ಇಂಗ್ಲೆಂಡಿನ ಚರ್ಚ್‍ನಲ್ಲಿ ಪಾದ್ರಿಯಾಗಿದ್ದ ಸ್ಯಾಮ್ಯುಯಲ್ ವೆಸ್ಲಿ ಈತನ ತಂದೆ. ಕಟ್ಟುನಿಟ್ಟಿನ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಈತ ಲಂಡನ್‍ನ ಚಾರ್ಟರ್ ಹೌಸ್ ಸ್ಕೂಲ್ ಮತ್ತು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು, ಅನಂತರ ಎರಡು ವರ್ಷಕಾಲ ಎಪ್‍ವರ್ತ್‍ನಲ್ಲಿ ಸಹಾಯಕ ಪಾದ್ರಿಯಾಗಿ ತನ್ನ ತಂದೆಗೆ ನೆರವಾದ. ಈ ಅವಧಿಯಲ್ಲಿ ಆಕ್ಸ್‍ಫರ್ಡ್‍ನಲ್ಲಿ ಓದುತ್ತಿದ್ದ ಈತನ ಸಹೋದರ ಚಾಲ್ರ್ಸ್‍ವೆಸ್ಲಿ (1707-88) ಎಂಬಾತ ಹೋಲಿಕ್ಲಬ್ ಎಂಬ ಸಂಘವನ್ನು ಸ್ಥಾಪಿಸಿದ್ದ. ಪ್ರತಿ ಭಾನುವಾರ ಸಾಯಂಕಾಲ ಕೆಲವು ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ಬೈಬಲ್ ಪಾರಾಯಣಕ್ಕಾಗಿ ಅಲ್ಲಿ ಸೇರುತ್ತಿದ್ದರು. ಈತ ಆಕ್ಸ್‍ಫರ್ಡ್‍ಗೆ ಹಿಂದಿರುಗಿದ ಮೇಲೆ ಈ ಸಂಘದ ಸದಸ್ಯನಾಗಿ ಸಕ್ರಿಯವಾಗಿ ಪಾಲುಗೊಂಡು ಅನಂತರ ಅದರ ಮುಖಂಡತ್ವ ವಹಿಸಿಕೊಂಡ. ಕಟ್ಟುನಿಟ್ಟಾದ ಮತಧರ್ಮಾಭಿಪ್ರಾಯಗಳನ್ನು ಹೊಂದಿ ಕ್ರೈಸ್ತ ಜೀವನಕ್ರಮವನ್ನು ಅನುಸರಿಸುವವರನ್ನು ಮೆತೊಡಿಸ್ಟ್ ಎಂದು ಕರೆಯಲಾಗುತ್ತದೆ. ಮೆತೊಡಿಸ್ಟ್ ಆದವ ತನಗೆ ಕ್ರೈಸ್ತನಲ್ಲಿರುವ ನಂಬಿಕೆಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳಬೇಕು. ದ್ವೇಷಾಸೂಯೆ ಗಳಿಂದ ದೂರವಿರಬೇಕು; ಇತರರ ಒಳಿತಿಗಾಗಿ ತನುಮನಧನಗಳನ್ನು ಅರ್ಪಿಸಿ ದುಡಿಯಬೇಕು. ಕ್ರೈಸ್ತನಲ್ಲಿ ನಂಬಿಕೆ ಮತ್ತು ನಿಯಮಬದ್ಧ ಜೀವನ ಮುಕ್ತಿದಾಯಕವಾದುದು ಎಂದು ಮೆತೊಡಿಸ್ಟರು ನಂಬುತ್ತಾರೆ. 1729ರಲ್ಲಿ ಇಂಥ ಧಾರ್ಮಿಕ ಆಂದೋಲನ ಈತನ ನೇತೃತ್ವದಲ್ಲಿ ಆರಂಭವಾಗಿ ಬೃಹದಾಕಾರವಾಗಿ ಬೆಳೆಯಿತು. ಈತ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‍ಗಳಲ್ಲಿ ಧರ್ಮಪ್ರಚಾರಕಾರ್ಯ ಕೈಗೊಂಡು ಮೆತೊಡಿಸ್ಟ್ ಸಂಘಗಳನ್ನು ಸ್ಥಾಪಿಸಿದ. ಇಂಗ್ಲೆಂಡಿನಲ್ಲಿ ಮಾತ್ರವಲ್ಲದೆ ಈ ಸಂಘ ಅಮೆರಿಕದಲ್ಲಿಯೂ ಸ್ಥಾಪನೆಗೊಂಡಿತು. 1739-44ರವರೆಗೆ ಈತ ಆರಂಭಿಸಿದ ಕೆಲವು ಸಂಘಗಳು ಅನಂತರ ಮೆತೊಡಿಸ್ಟ್ ಚರ್ಚುಗಳಾಗಿ ಪರಿವರ್ತನೆಹೊಂದಿದುವು. 

	ಆದರೆ ಇವನ ಬೋಧನಕ್ರಮವನ್ನು ಆಂಗ್ಲಿಕನ್ ಚರ್ಚ್‍ಗಳು ನಿರಾಕರಿಸಿದುವು. ಚರ್ಚ್‍ನೊಳಗೆ ಬೋಧಿಸಲು ಅವಕಾಶಕೊಡಲಿಲ್ಲ. ಆಗ ಈತ ಬೀದಿಗಿಳಿದು ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮ ಪ್ರಸಾರ ಕಾರ್ಯಕೈಗೊಂಡ. ಕೆಲವರು ಮಾತ್ರ ಮುಕ್ತಿಗೆ ಅರ್ಹರಲ್ಲ ಎಲ್ಲರೂ ಮುಕ್ತಿಗೆ ಅರ್ಹರು ಎಂದು ನಂಬಿದ್ದ ಈತ ಯಾವ ವಿಧಿಗಳನ್ನೂ ಪಾಲಿಸದೆ ಸಾಮಾನ್ಯ ಬೋಧಕರನ್ನು (ಲೇ ಪ್ರೀಚರ್ಸ್) ನೇಮಿಸಿಕೊಂಡು ಅವರಿಗೆ ತರಬೇತಿನೀಡಿ ತನ್ನ ಹೊಸತತ್ತ್ವಗಳನ್ನು ಪ್ರಚುರ ಪಡಿಸಲು ಕಳುಹಿಸಿಕೊಟ್ಟ. ಈ ಬೋಧಕರು ಕೊನೆಯಿಲ್ಲ ದಂತೆ ಪ್ರಯಾಣಮಾಡಿ ಶ್ರದ್ಧೆಯಿಂದ ಮೆತೊಡಿಸ್ಟ್ ತತ್ತ್ವಗಳನ್ನು ಪ್ರಸಾರ ಮಾಡಿ ದರು. ಈತನ ನೇತೃತ್ವದಲ್ಲಿ ಮೆತೊಡಿಸ್ಟ್ ಸಾಮಾನ್ಯ ಬೋಧಕರ ಸಮ್ಮೇಳನ ನಡೆಯಿತು(1744). ಈತ ಸದಾ ಕುದುರೆಯ ಮೇಲೆ ಪ್ರಯಾಣ ಕೈಗೊಂಡು ಪ್ರಚಾರಕಾರ್ಯ ನಡೆಸುತ್ತ ಮೆತೊಡಿಸ್ಟ್ ಸಂಘಗಳಿಗೆ ಭೇಟಿಕೊಡುತ್ತಿದ್ದ. ಹೀಗೆ ಈತ ಸು. 25,000 ಮೈಲಿ (40,000 ಕಿಮೀ) ಪ್ರಯಾಣ ಮಾಡಿರ ಬಹುದೆಂದು ಅಂದಾಜು. ಈತ ನಿಧನ ಹೊಂದಿದಾಗ ಮೆತೊಡಿಸ್ಟ್ ಚರ್ಚ್ 175,000 ಸದಸ್ಯರನ್ನೂ 630 ಸಾಮಾನ್ಯ ಬೋಧಕರನ್ನೂ ಒಳಗೊಂಡಿತ್ತು. ಈತ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ಜರ್ನಲ್ (1735-90) ಎಂಬ ಕೃತಿ ಅತ್ಯಂತ ಪ್ರಸಿದ್ಧವಾಗಿದೆ. ಈತ 1791ರಲ್ಲಿ ನಿಧನನಾದ.

	ಈತನ ತಮ್ಮ ಚಾಲ್ರ್ಸ್‍ವೆಸ್ಲಿ ಕೂಡ ಮೆತೊಡಿಸ್ಟ್ ಆಂದೋಲನದಲ್ಲಿ ಭಾಗಿಯಾಗಿದ್ದ. ಇವನು ಮೆತೊಡಿಸಮ್‍ಗೆ ಸಂಬಂಧಿಸಿದಂತೆ ಸು.6000 ಸ್ತೋತ್ರಗಳನ್ನು ರಚಿಸಿದ್ದಾನೆ. ಇವುಗಳನ್ನು ಇವ್ಯಾಂಜಿಲಿಕಲ್ ಪ್ರಾಟೆಸ್ಟಂಟರು ಇಂದಿಗೂ ಹಾಡುತ್ತಾರೆ. ಸು.17 ವರ್ಷಗಳ ಕಾಲ ಈತ ಸಂಚಾರಿ ಪಾದ್ರಿಯಾಗಿದ್ದ. ಕೆಲವು ವಿಷಯಗಳ ಬಗ್ಗೆ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಇಬ್ಬರೂ ಕಡೆಯ ವರೆಗೆ ಅನ್ಯೋನ್ಯವಾಗಿದ್ದರು.	

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						
		*